ವಿಮರ್ಶೆ: ಅದ್ಭುತ ಭಾವನಾತ್ಮಕ 'ಯಾನ', ಅಪ್ಪ-ಮಗಳ ಈ 'ಪುಷ್ಟಕ ವಿಮಾನ'

Header Banner

ವಿಮರ್ಶೆ: ಅದ್ಭುತ ಭಾವನಾತ್ಮಕ 'ಯಾನ', ಅಪ್ಪ-ಮಗಳ ಈ 'ಪುಷ್ಟಕ ವಿಮಾನ'

  Sat Jan 07, 2017 09:58        Cinemas, Kannada

'ಪುಷ್ಪಕ ವಿಮಾನ' ಒಂದು ಪರಿಪೂರ್ಣ ಭಾವನಾತ್ಮಕ ಪಯಣ. ಇದು ಅಪ್ಪ-ಮಗಳ ಅದ್ಭುತ ಜಗತ್ತು. ಈ ಪ್ರಪಂಚದಲ್ಲಿ ಎಲ್ಲರೂ ಇದ್ದಾರೆ. ಆದ್ರೆ, ಅಪ್ಪನಿಗೆ ಮಗಳು, ಮಗಳಿಗೆ ಅಪ್ಪ ಮಾತ್ರನೇ ಜಗತ್ತು. ಅಪ್ಪ-ಮಗಳ ಈ 'ಭಾವ-ಬಂಧ' ನೋಡುಗರನ್ನ ನಗಿಸುತ್ತದೆ, ಅಳಿಸುತ್ತದೆ.

ರಮೇಶ್ ಅರವಿಂದ್ ಅವರ 100ನೇ ಸಿನಿಮಾ ತುಂಬಾ ವಿಶೇಷವಾಗಿರಲಿದೆ ಎಂದು ಹೇಳಲಾಗಿತ್ತು. ಆ ಮಾತು ಈಗ ಅಕ್ಷರಹ ಸತ್ಯವಾಗಿದೆ. 'ಪುಷ್ಪಕ ವಿಮಾನ' ಚಿತ್ರದ ಸಂಪೂರ್ಣ ವಿಮರ್ಶೆ ಮುಂದೆ ಓದಿರಿ.....

Rating: 4.0/5

ಚಿತ್ರ : ಪುಷ್ಪಕ ವಿಮಾನ

ನಿರ್ದೇಶಕ : ಎಸ್.ರವೀಂಧ್ರನಾಥ್

ನಿರ್ಮಾಪಕ : ಪವನ್ ಒಡೆಯರ್, ವಿಖ್ಯಾತ್, ದೀಪಕ್ ಕಿಶೋರ್, ದೀಪಕ್ ಕೃಷ್ಣ, ಸುಕೃತಾ ದೇವೇಂದ್ರ

ಸಂಗೀತ ನಿರ್ದೇಶನ : ಚರಣ್ ರಾಜ್

ಕಥೆ: ಎಸ್.ರವೀಂಧ್ರನಾಥ್

ಛಾಯಗ್ರಹಣ: ಭುವನ್ ಗೌಡ

ಸಂಭಾಷಣೆ: ಗುರುಪ್ರಸಾದ್ ಕಶ್ಯಪ್

ತಾರಾಗಣ : ರಮೇಶ್ ಅರವಿಂದ್, ಯುವಿನಾ ಪಾರ್ಥವಿ, ರಚಿತಾ ರಾಮ್, ರವಿಕಾಳೆ, ಪ್ರದೀಪ್ ಪೂಜಾರಿ, ನಿಶಾಂತ್, ವಿರಾಜ್, ಮಂಜುನಾಥ್ ಮತ್ತು ಇತರರು ಬಿಡುಗಡೆ : ಜನವರಿ 6, 2017

ಬುದ್ದಿಮಾಂದ್ಯ ಅಪ್ಪನಿಗೆ ಮಗಳೇ ಪ್ರಪಂಚ

ಬುದ್ದಿಮಾಂಧ್ಯ ಅನಂತ ರಾಮಯ್ಯಗೆ (ರಮೇಶ್ ಅರವಿಂದ್) ತಾಯಿಯಿಲ್ಲದ ಮುದ್ದು ಮಗಳು ಪುಟ್ಟಲಕ್ಷ್ಮಿ (ಯುವಿನಾ) ಅಂದ್ರೆ ಪ್ರಾಣ. ಮಗಳಿಗೆ ಅಪ್ಪನೇ ಪ್ರಪಂಚ. ಪುಟ್ಟುಗೂ ಅವರ ಅಪ್ಪನ ಬಿಟ್ರೆ ಬೇರೇನೂ ಇಲ್ಲ. ಆಟ-ಪಾಠ, ಜಗಳ, ಎಲ್ಲವೂ ಅಪ್ಪನ ಜೊತೆನೇ. ಹೀಗೆ ಸಾಗುವ ಇವರಿಬ್ಬರದ್ದು ಒಂದು ಸುಂದರ ಪಯಣ.

ಅಪ್ಪ-ಮಗಳ ಸುಂದರ ಜೀವನದಲ್ಲೊಂದು ವಿಘ್ನ!

ಅನಂತ ರಾಮಯ್ಯ ಮತ್ತು ಪುಟ್ಟುವಿನ ಪಯಣ ಸುಂದರವಾಗಿ ನಡೆಯುತ್ತಿರುವಾಗ ಒಂದು ದೊಡ್ಡ ಘಟನೆಯೊಂದು ನಡೆದುಹೋಗುತ್ತೆ. ಮಗಳಿಗೆ ವಿಮಾನವನ್ನ ಗಿಫ್ಟ್ ಕೊಡಬೇಕು ಎಂಬ ಕನಸನ್ನ ಹೊಂದಿದ್ದ ಅನಂತರಾಮಯ್ಯ ಒಂದು ಕೊಲೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿ ಜೈಲು ಸೇರುತ್ತಾನೆ. ಮುಂದೇನಾಗುತ್ತೆ ಎಂಬುದು ಕುತೂಹಲ.

ಭಾವನೆಯ ಜೊತೆ ಮನರಂಜನೆ!

'ಪುಷ್ಪಕ ವಿಮಾನ' ಬರೀ ಭಾವನಾತ್ಮಕ ಚಿತ್ರವಲ್ಲ. ಈ ಚಿತ್ರದಲ್ಲಿ ಕಮರ್ಷಿಯಲ್ ಅಂಶಗಳು ಒಳಗೊಂಡಿದೆ. ಜೈಲಿನಲ್ಲಿ ನಡೆಯುವ ರೌಡಿಸಂ, ಪೋಲೀಸರ ಕಣ್ಣು ತಪ್ಪಿಸಿ ಒಳಗೆ ನಡೆಯುವ ದಂಧೆಯ ದೃಶ್ಯಗಳು ಗಮನ ಸೆಳೆಯುತ್ತೆ. ಹಾಸ್ಯದ ಮೂಲಕ ಭಾವನಾತ್ಮಕವಾಗಿದ್ದವರನ್ನ ನಗಿಸುತ್ತಾರೆ. ಇನ್ನೂ ಡಬ್ಬಲ್ ಮೀನಿಂಗ್ ಡೈಲಾಗ್ ಗಳ ಮೂಲಕ ಪಡ್ಡೆ ಹುಡುಗರನ್ನ ರಂಜಿಸಿದ್ದಾರೆ.

ಮನಸ್ಸು ಮುಟ್ಟುವ ರಮೇಶ್ ಅರವಿಂದ್!

'ಪುಷ್ಪಕ ವಿಮಾನ'ದಲ್ಲಿ ರಮೇಶ್ ಅರವಿಂದ್ ಅವರು ಸಿನಿರಸಿಕರ ಮನಸ್ಸು ಮುಟ್ಟುತ್ತಾರೆ. ತಮ್ಮ ಅದ್ಭುತ ಅಭಿನಯದ ಮೂಲಕ ಪ್ರತಿಯೊಬ್ಬರನ್ನು ಕಾಡುತ್ತಾರೆ. ಬುದ್ದಿಮಾಂದ್ಯ ವ್ಯಕ್ತಿಯಾಗಿ ಅವರ ವೇ‍ಷಭೂಷಣ, ಅವರ ಮ್ಯಾನರಿಸಂ ಹಾಗೂ ಅವರ ಮಾತಿನ ಶೈಲಿಗೆ ಚಪ್ಪಾಳೆ ಗಿಟ್ಟಿಸಿಕೊಳ್ತಾರೆ. ಈ ಮೂಲಕ ತಮ್ಮ 100ನೇ ಸಿನಿಮಾದಲ್ಲಿ ರಮೇಶ್ ವಿಶೇಷವಾಗಿ ಪ್ರೇಕ್ಷರೆದುರು ಬಂದಿದ್ದಾರೆ.

ತಂದೆಗೆ ತಕ್ಕ ಮಗಳು ಯುವಿನಾ

ಮಗಳ ಪಾತ್ರದಲ್ಲಿ ಬಾಲನಟಿ ಯುವಿನಾ ನೈಜ ಅಭಿನಯದ ಮೂಲಕ ಗಮನ ಸೆಳೆದಿದ್ದಾರೆ. ಬುದ್ದಿಮಾಂಧ್ಯ ಅಪ್ಪನ ಜೊತೆ ಬುದ್ದಿವಂತೆ ಮಗಳಾಗಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇಡೀ ಚಿತ್ರಕ್ಕೆ ರಮೇಶ್ ಅವರಿಗೆ ಸಾಥ್ ಕೊಟ್ಟಿರುವ ಯುವಿನಾ ತೆರೆಮೇಲಿನ ಸೆಕೆಂಡ್ ಹೀರೋ

ವಿಭಿನ್ನವೆನಿಸುವ ರಚಿತಾ ರಾಮ್

ಚಿತ್ರದ ಮೊದಲ ದೃಶ್ಯದಲ್ಲೇ ಎಂಟ್ರಿ ಕೊಡುವ ರಚಿತಾ ರಾಮ್, ಚಿತ್ರದ ವಿಶೇಷ ಹಾಗೂ ಸರ್ಪ್ರೈಸ್ ಅಂತಾನೇ ಹೇಳಬಹುದು. ಸದಾ ಗ್ಲಾಮರ್ ಹುಡುಗಿಯಾಗಿ ನೋಡುತ್ತಿದ್ದ ರಚಿತಾ ರಾಮ್, ಅಡ್ವೋಕೇಟ್ ಪಾತ್ರದಲ್ಲಿ ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ. ರಮೇಶ್ ಅರವಿಂದ್ ಅವರ ದೊಡ್ಡ ಪುಟ್ಟಲಕ್ಷ್ಮಿಯಾಗಿ ರಚಿತಾ ರಾಮ್ ಬಣ್ಣ ಹಚ್ಚಿದ್ದು, ಕೋರ್ಟ್ ಹಾಲ್ ನಲ್ಲಿ ತಮ್ಮ ತಂದೆ ಪರಕರಣವನ್ನ ವಾದಿಸುವ ಲಾಯರ್ ಪುಟ್ಟು ಮೆಚ್ಚುಗೆಯಾಗುತ್ತಾರೆ.

'ಪುಷ್ಪಕ ವಿಮಾನ'ದಲ್ಲಿರುವ ಉಳಿದವರು....

ರಮೇಶ್, ಯುವಿನಾ, ರಚಿತಾ ರಾಮ್ ಅವರೊಂದಿಗೆ ಹಲವು ಯುವ ಪ್ರತಿಭೆಗಳು ಕಾಣಿಸಿಕೊಂಡಿದ್ದಾರೆ. ಜೈಲರ್ ಪಾತ್ರದಲ್ಲಿ ರವಿಕಾಳೆ ಅವರದ್ದು ಜಬರ್ ದಸ್ತ್ ಆಕ್ಟಿಂಗ್. ಖೈದಿಗಳಾಗಿ ಪ್ರದೀಪ್ ಪೂಜಾರಿ, ಮಂಜುನಾಥ್, ವಿರಾಜ್, ನಿಶಾಂತ್ ಗುಡಿಹಳ್ಳಿ, ಹಾಗೂ ರಾಕ್ ಲೈನ್ ಸುಧಾಕರ್ ಅವರ ಅಭಿನಯಕ್ಕೆ ಫುಲ್ ಮಾರ್ಕ್ಸ್. ಕಾಮಿಡಿ ಮೂಲಕ ನಗಿಸುವ ಇವರು, ಭಾವನೆ ಮೂಲಕ ಅಳಿಸಲು ಸಾಥ್ ಕೊಟ್ಟಿದ್ದಾರೆ.

ಹಾಡೊಂದಕ್ಕೆ ಸೀಮಿತ ಜೂಹಿ ಚಾವ್ಲಾ!

'ಪ್ರೇಮಲೋಕ'ದ ಸುಂದರಿ ಜೂಹಿ ಚಾವ್ಲಾ, 'ಪುಷ್ಪಕ ವಿಮಾನ'ದಲ್ಲಿ ಕೇವಲ ಹಾಡೊಂದಕ್ಕೆ ಬಂದು ಹೋಗಿದ್ದಾರೆ. ಜೈಲಿನಲ್ಲಿ ನಡೆಯುವ ನೃತ್ಯ ಕಾರ್ಯಕ್ರಮದಲ್ಲಿ ಹೆಜ್ಜೆ ಹಾಕುವ ಜೂಹಿ ಚಾವ್ಲಾ ಅವರನ್ನ ಮತ್ತೆ ಸ್ಯಾಂಡಲ್ ವುಡ್ ತೆರೆಮೇಲೆ ನೋಡುವುದು ಒಂದು ಖುಷಿ ಎನ್ನುವುದು ಬಿಟ್ರೆ, ವಿಶೇಷವೇನು ಇಲ್ಲ.

ಚರಣ್ ರಾಜ್ ಸಂಗೀತ

'ಪುಷ್ಪಕ ವಿಮಾನ' ಹಾಡುಗಳು ಚಿತ್ರಕ್ಕೆ ಪೂರಕವಾಗಿದೆ. ಹಿನ್ನೆಲೆ ಸಂಗೀತ ಹೆಚ್ಚು ಗಮನ ಸೆಳೆಯುತ್ತೆ. ಅದರಲ್ಲೂ ಚಿತ್ರದ ಥೀಮ್ ಸಾಂಗ್, ಚಿತ್ರಮಂದಿರದಿಂದ ಹೊರಬಂದ ಮೇಲೂ ಕಾಡುತ್ತೆ.

ಟೆಕ್ನಿಕಲಿ 'ಪುಷ್ಪಕ ವಿಮಾನ' ಸ್ಟ್ರಾಂಗ್!

'ಪುಷ್ಪಕ ವಿಮಾನ' ಚಿತ್ರದ ಪ್ಲಸ್ ಪಾಯಿಂಟ್ ಭುವನ್ ಗೌಡ ಕ್ಯಾಮರಾ ವರ್ಕ್ ಹಾಗೂ ಗುರುಪ್ರಸಾದ್ ಕಶ್ಯಪ್ ಅವರ ಸಂಭಾಷಣೆ. ಭಾವನಾತ್ಮಕ ಸಂಭಾಷಣೆಯ ಮೂಲಕ ಹೃದಯ ಮುಟ್ಟುವಂತಹ ಡೈಲಾಗ್ ಗಳು ಒಂದೆಡೆಯಾದ್ರೆ, ಪಡ್ಡೆ ಹುಡುಗರಿಗೆ ಕಿಕ್ ನೀಡುವಂತಹ ಡಬ್ಬಲ್ ಮೀನಿಂಗ್ ಡೈಲಾಗ್ ಗಳ ಮೂಲಕ ಮತ್ತೊಂದೆಡೆ ತಮ್ಮ ಕೈಚಳಕ ತೋರಿದ್ದಾರೆ. ಇನ್ನೂ ಭುವನ್ ಗೌಡ ಅವರ ಸಿನಿಮಾಟೋಗ್ರಫಿ ಪ್ರತಿಯೊಂದು ದೃಶ್ಯವನ್ನ ಮೋಹಕ ಹಾಗೂ ಅದ್ದೂರಿಯಾಗಿಸಿದೆ.

ಕೊರಿಯನ್ ಸಿನಿಮಾ ಯಥಾವತ್ ನಕಲು!

'ಪುಷ್ಪಕ ವಿಮಾನ' ರೀಮೇಕ್ ಚಿತ್ರವಲ್ಲ, ಇದು ಕೊರಿಯಾದ ''ಮಿರಾಕಲ್ ಸೆಲ್ ನಂಬರ್ 7'' ಚಿತ್ರದ ಸ್ಪೂರ್ತಿ ಎಂದು ನಿರ್ದೇಶಕರು ಹೇಳಿಕೊಂಡು ಬಂದಿದ್ದರು. ಆದ್ರೆ, ಸಿನಿಮಾ ನೋಡಿದ ಮೇಲೆ ಇದು ಸ್ಪೂರ್ತಿ ಎನ್ನುವುದಕ್ಕಿಂತ ಯಥಾವತ್ತಾಗಿ ನಕಲು ಮಾಡಲಾಗಿದೆ ಎಂಬ ಅನುಮಾನ ಪ್ರೇಕ್ಷಕರಿಗೆ ಕಾಡದೆ ಇರಲ್ಲ.

ಫೈನಲ್ ಸ್ಟೇಟ್ ಮೆಂಟ್

ನಿರೀಕ್ಷೆ ಹುಟ್ಟಿಸಿದಾಗೆ 'ಪುಷ್ಪಕ ವಿಮಾನ' ಹುಸಿ ಮಾಡಲಿಲ್ಲ. ಅಪ್ಪ-ಮಗಳ ಭಾವ, ಬಂಧವನ್ನ ಭಾವನೆಗಳ ಮೂಲಕ ಕಟ್ಟಿಕೊಟ್ಟಿದೆ. ಎಲ್ಲ ವರ್ಗದ ಪ್ರೇಕ್ಷಕರನ್ನ ಮುಟ್ಟುವಂತಹ ಸಿನಿಮಾ ಇದು. ತಂದೆ ಜೊತೆಯಲ್ಲಿ ಸಿನಿಮಾ ನೋಡಿದ್ರೆ, ಬಹುಶಃ ಅದ್ಭುತ ಅನುಭವ ಎಂಬುದು ಸಿನಿಮಾ ನೋಡಿದವರು ಮಾತು. ವರ್ಷದ ಮೊದಲ ವಾರದಲ್ಲಿ ಒಂದೊಳ್ಳೆ ಸಿನಿಮಾ ಬಂದಿದೆ. ರೀಮೇಕ್, ಸ್ಪೂರ್ತಿನಾ, ಕಾಪಿನ ಎನ್ನುವುದನ್ನ ಬಿಟ್ಟು, ಸಿನಿಮಾ ನೋಡಿ ಎಂಜಾಯ್ ಮಾಡಬಹುದು.


   review, ramesh aravind, rachita ram, juhi chawla, sandalwood, ವಿಮರ್ಶೆ, ರಮೇಶ್ ಅರವಿಂದ್, ಜೂಹಿ ಚಾವ್ಲಾ, ಸ್ಯಾಂಡಲ್ ವುಡ್, ಕನ್ನಡ ಸಿನಿಮಾ