ನಿಷೇಧಿತ ನೋಟುಗಳ ಎಣಿಕೆ ಕಾರ್ಯ ಪೂರ್ಣಗೊಳ್ಳಲು ಮತ್ತಷ್ಟು ಸಮಯ ಬೇಕು: ಆರ್ ಬಿಐ

Header Banner

ನಿಷೇಧಿತ ನೋಟುಗಳ ಎಣಿಕೆ ಕಾರ್ಯ ಪೂರ್ಣಗೊಳ್ಳಲು ಮತ್ತಷ್ಟು ಸಮಯ ಬೇಕು: ಆರ್ ಬಿಐ

  Fri Jan 06, 2017 14:59        Business, Kannada

ಕಳೆದ ನವೆಂಬರ್ 8ರಂದು ನಿಷೇಧಗೊಂಡ 500 ಮತ್ತು 1000 ರು.ಮುಖಬೆಲೆಯ ನೋಟುಗಳ ಎಣಿಕೆಕಾರ್ಯ ಪೂರ್ಣಗೊಳ್ಳಲು ಮತ್ತಷ್ಟು ಕಾಲಾವಕಾಶ ಬೇಕು ಎಂದು ಆರ್ ಬಿಐ ಹೇಳಿದೆ.
ನೋಟು ನಿಷೇಧವಾದ ದಿನದಿಂದ ಈ ವರೆಗೂ ಬ್ಯಾಂಕುಗಳು ಮತ್ತು ಪೋಸ್ಟ್ ಆಫೀಸ್ ಮೂಲಕವಾಗಿ ಭಾರಿ ಪ್ರಮಾಣದ ಹಳೆಯ ನೋಟುಗಳು ಹರಿದುಬಂದಿದ್ದು, ಹೀಗೆ ಆರ್ ಬಿಐಗೆ ಬಂದ ನೋಟುಗಳು ಎಷ್ಟಿವೆ ಎಂಬ ನಿಖರ ಉತ್ತರಕ್ಕಾಗಿ ಮತ್ತಷ್ಟು ದಿನ ಕಾಯಬೇಕಿದೆ ಎಂದು ಆರ್ ಬಿಐ ಹೇಳಿದೆ. ನೋಟುಗಳು ಎಷ್ಟಿವೆ ಎಂದು ತಿಳಿಸಲು ನಿಖರ ದಿನಾಂಕವನ್ನು ನೀಡುವುದು ಅಸಾಧ್ಯ. ಏಕೆಂದರೆ ನೋಟು ನಿಷೇಧವಾಗಿ 50 ದಿನಗಳು ಕಳೆದರೂ ಬ್ಯಾಂಕಿಗೆ ಆಗಮಿಸುತ್ತಿರುವ ಹಳೆಯ ನಿಷೇಧಿತ ನೋಟುಗಳು ನಿಂತಿಲ್ಲ. ಹೀಗಾಗಿ ನಿಖರ ದಿನಾಂಕ ನಿಗದಿಪಡಿಸಲು ಸಾಧ್ಯವಿಲ್ಲ ಎಂದು ಆರ್ ಬಿಐ ಹೇಳಿದೆ.
ಮುದ್ರಣವಾದ ನೋಟುಗಳ ಸಂಖ್ಯೆ ಹಾಗೂ ಚಲಾವಣೆಗೆ ಬಂದಿರುವ ನೋಟುಗಳ ಸಂಖ್ಯೆಯಲ್ಲಿ ವ್ಯತ್ಯಾಸ ಕಂಡುಬಂದರೆ ಆಗ ಕೆಲ ಶಂಕೆಗಳು ಮೂಡುತ್ತವೆ. ನಕಲಿ ನೋಟುಗಳು ಹರಿದಾಡಿರುವ ಶಂಕೆ ವ್ಯಕ್ತವಾಗುತ್ತದೆ. ಬ್ಯಾಂಕಿಗೆ ಬಂದಿರುವ ನೋಟುಗಳು ನಕಲಿಯೇ ಅಥವಾ ಎಣಿಕೆ ಕಾರ್ಯದ ದೋಷವೇ ಎಂದ ತಿಳಿಯಬೇಕಾಗುತ್ತದೆ. ಒಂದು ವೇಳೆ ನೋಟುಗಳು ಕಡಿಮೆ ಪ್ರಮಾಣದಲ್ಲಿ ಬಂದಿದ್ದರೆ ಆಗ ತೆರಿಗೆ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗುತ್ತದೆ ಎಂದು ಆರ್ ಬಿಐ ತಿಳಿಸಿದೆ.
ಕಳೆದ ನವೆಂಬರ್ 29ರಂದು ವಿತ್ತ ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಅವರು, ನಿಷೇಧಿತ 500 ರು. ಮುಖಬೆಲೆಯ ಸುಮಾರು 17,165 ಮಿಲಿಯನ್ ನೋಟುಗಳು ಮತ್ತು 1000 ರು.ಮುಖಬೆಲೆಯ 6,858 ಮಿಲಿಯನ್ ನೋಟುಗಳಿವೆ ಎಂದು ಹೇಳಿದ್ದರು. ಈ ಅಂಕಿ ಅಂಶದ ಪ್ರಕಾರ 15.44 ಲಕ್ಷ ಕೋಟಿ ನಿಷೇಧಿತ ನೋಟುಗಳಿದ್ದು, ಡಿಸೆಂಬರ್ 30ರವೆರಗೂ ಸರಿ ಸುಮಾರು 15 ಲಕ್ಷ ಕೋಟಿ ಹಣ ಬ್ಯಾಂಕುಗಳಿಗೆ ಜಮೆಯಾಗಿದೆ. ಈ ಪೈಕಿ ಎಣಿಕೆ ದೋಷ ಹಾಗೂ ಖೋಟಾ ನೋಟುಗಳನ್ನು ವಿಂಗಡಿಸಬೇಕಾಗುತ್ತದೆ. ಹೀಗಾಗಿ ಹಳೆಯ ನೋಟುಗಳ ನಿಖರ ಮಾಹಿತಿಗೆ ಇನ್ನಷ್ಟು ಕಾಲಾವಕಾಶ ಬೇಕಾಗುತ್ತದೆ ಎಂದು ಆರ್ ಬಿಐ ಹೇಳಿದೆ.
ಈ ಹಿಂದೆಯೂ ಕೂಡ ಕೇಂದ್ರ ವಿತ್ತ ಸಚಿವಾಲಯ ಬ್ಯಾಂಕುಗಳಿಗೆ ಬಂದಿರುವ ನೋಟುಗಳ ಅಂಕಿಅಂಶವನ್ನು ಗಮನಿಸಿದರೆ ಎಣಿಕೆಯಲ್ಲಿ ಲೋಪವಾಗಿರುವ ಕುರಿತು ಶಂಕೆ ಮೂಡುತ್ತಿದೆ. ಎರಡೆರಡು ಬಾರಿ ಎಣಿಕೆಯಾಗಿರುವ ಸಾಧ್ಯತೆಗಳಿವೆ ಎಂದು ಶಂಕೆ ವ್ಯಕ್ತಪಡಿಸಿತ್ತು.   New Delhi, RBI, Demonetization, Union Government, ನವದೆಹಲಿ, ಆರ್ ಬಿಐ, ನೋಟು ನಿಷೇಧ, ಕೇಂದ್ರ ಸರ್ಕಾರ