ತುಂಗನಾಥ್: ವಿಶ್ವದ ಅತಿ ಎತ್ತರದಲ್ಲಿರುವ ದೇವಾಲಯ, ಪುಣ್ಯಕ್ಷೇತ್ರ!

Header Banner

ತುಂಗನಾಥ್: ವಿಶ್ವದ ಅತಿ ಎತ್ತರದಲ್ಲಿರುವ ದೇವಾಲಯ, ಪುಣ್ಯಕ್ಷೇತ್ರ!

  Thu Dec 29, 2016 17:10        Kannada, Travel

ತುಂಗನಾಥ್ (ಶಿಖರಗಳ ಒಡೆಯ) ವಿಶ್ವದ ಅತಿ ಎತ್ತರದ ದೇವಾಲಯ ಇರುವ ಪುಣ್ಯಕ್ಷೇತ್ರ. ಉತ್ತರಾಖಂಡ್ ನ ರುದ್ರಪ್ರಯಾಗದಲ್ಲಿ 12,000 ಅಡಿ ಎತ್ತರ ಇರುವ ಈ ಪುಣ್ಯಕ್ಷೇತ್ರ, ದೇವಾಲಯಕ್ಕೆ ಇದೆ 1000 ವರ್ಷದ ಇತಿಹಾಸ.

ಪಂಚ ಕೇದಾರಗಳಲ್ಲಿ ಎರಡನೆಯದಾಗಿರುವ ತುಂಗನಾಥ್ ಗೂ ಮಹಾಭಾರತಕ್ಕೂ ನಂಟಿದೆ. ಮಹಾಭಾರತದ ಕುರುಕ್ಷೇತ್ರದ ಯುದ್ಧದಲ್ಲಿ ಹತ್ಯೆ ಮಾಡಿದ ಪಾಪಕ್ಕಾಗಿ ಪ್ರಾಯಶ್ಚಿತ್ತ ಮಾಡಿಕೊಳ್ಳುವುದಕ್ಕಾಗಿ ಪಾಂಡವರು ನಿಶ್ಚಯಿಸುತ್ತಾರೆ. ಆದ್ದರಿಂದ ಪಾಪದ ಪ್ರಾಯಶ್ಚಿತ್ತಕ್ಕಾಗಿ ಕೇದಾರದಲ್ಲಿರುವ ಶಿವನ ಅನುಗ್ರಹ ಪಡೆಯಲು ಮುಂದಾಗುತ್ತಾರೆ. ಆದರೆ ಪಾಂಡವರ ಘನಘೋರ ಪಾತಕ ಕೃತ್ಯದ ಬಗ್ಗೆ ಸಿಟ್ಟುಗೊಂಡಿದ್ದ ಶಿವ ಸೆಟೆದು ಪಾಂಡವರತ್ತ ಮುಖಮಾಡಲಿಲ್ಲ. ಪಾಂಡವರ ಪಾಪಕ್ಕೆ ಮುಕ್ತಿ ನೀಡುವ ಮನಸ್ಸಿಲ್ಲದೇ ಶಿವ ನಂದಿಯ ರೂಪ ಧರಿಸಿ ಹಿಮಾಲಯದ ಗರ್ಹ್ವಾಲ್ ನಲ್ಲಿರುವ ಗುಪ್ತಾಕ್ಷಿಯಲ್ಲಿ ಅದೃಶ್ಯನಾಗುತ್ತಾನೆ. ಆದರೆ ಪಾಂಡವರಿಗೆ ಏನೋ ವಿಶೇಷವಾದ ಘಟನೆ ನಡೆದಿದೆ ಎಂಬುದು ಅರಿವಿಗೆ ಬರುತ್ತದೆ. ತಕ್ಷಣವೇ ದೈತ್ಯದೇಹಿ ಭೀಮ ಎರಡು ಬೃಹತ್ ಬೆಟ್ಟಗಳಾಗಿ ಮಾರ್ಪಡುತ್ತಾನೆ. ಆ ಪ್ರದೇಶದಲ್ಲಿದ್ದ ಎಲ್ಲಾ ಜಾನುವಾರುಗಳು ಅವನ ಕಾಲಿನಡಿ ನುಸುಳಿ ಹೋಗುತ್ತವೆ. ಆದರೆ ಒಂದು ನಂದಿ ಮಾತ್ರ ಹೋಗದೆ ಹಾಗೇ ನಿಂತು ಬಿಡುತ್ತದೆ. ಇದನ್ನು ಗಮನಿಸಿದ ಭೀಮ ಈತನೇ ಶಂಕರನೆಂದು ಖಚಿತವಾಗಿ ತಿಳಿದು ಅದನ್ನು ಹಿಡಿಯುತ್ತಾನೆ. ತಪ್ಪಿಸಿಕೊಳ್ಳುವ ಸಲುವಾಗಿ ಎತ್ತು ನೆಲದಲ್ಲಿ ಇಳಿದು ಬಿಡುತ್ತದೆ. ಆಗ ಎತ್ತಿನ ಡುಬ್ಬ ಮಾತ್ರ ಕೈಗೆ ಸಿಕ್ಕಿ ಅದನ್ನೇ ಹಿಡಿದು ಮೇಲಕ್ಕೆತ್ತುತ್ತಾನೆ. ಎತ್ತಿನ ಡುಬ್ಬ ಮಾತ್ರ ಕೇದಾರನಾಥದಲ್ಲಿ ಉಳಿದು ಬಿಡುತ್ತದೆ. ಶಿರೋ ಭಾಗ ರುದ್ರನಾಥ, ಮುಂಡ ಮಧ್ಯಮ ಮಹೇಶ್ವರದಲ್ಲಿ, ತೋಳುಗಳು ತುಂಗಾನಾಥದಲ್ಲಿ, ಹಾಗೂ ದೇಹದ ಉಳಿದ ಭಾಗ ನೇಪಾಳದ ಪಶುಪತಿನಾಥ ಮತ್ತು ಕರೈಶ್ವರದಲ್ಲಿ ಹಂಚಿ ಹೋಗುತ್ತದೆ. ಪ್ರಸನ್ನನಾದ ಶಿವ ಪ್ರತ್ಯಕ್ಷನಾಗಿ ಪಾಂಡವರನ್ನು ಆಶೀರ್ವದಿಸುತ್ತಾನೆ.

ಬಾಹುಗಳು ಉಳಿದ ಪ್ರದೇಶವೇ ತುಂಗಾನಾಥ ಕ್ಷೇತ್ರವಾಗಿದ್ದು, ಉತ್ತರ ಭಾರತದ ಶೈಲಿಯಲ್ಲಿ ದೇವಾಲಯವನ್ನು ನಿರ್ಮಿಸಲಾಗಿದೆ. ದೇವಾಲಯದಲ್ಲಿ ಒಮ್ಮೆ 10 ಜನರು ಮಾತ್ರ ಹೋಗಬಹುದಾಗಿರುವಷ್ಟು ಜಾಗವಿದ್ದು, ಚಳಿಗಾಲದಲ್ಲಿ ಹಿಮ ಕರಗಿದ ನಂತರ ಅಂದರೆ ಜೂನ್ ನಿಂದ ಅಕ್ಟೋಬರ್ ವರೆಗೆ ದೇವಾಲಯದ ಬಾಗಿಲು ತೆರೆದಿರುತ್ತದೆ. ತುಂಗನಾಥ್ ಕೇವಲ ಪುಣ್ಯಕ್ಷೇತ್ರವಷ್ಟೇ ಆಗಿರದೆ ಚಾರಣ ಪ್ರಿಯರ ನೆಚ್ಚಿನ ಕ್ಷೇತ್ರವಾಗಿದ್ದು ಹತ್ತಿರದಲ್ಲೇ ಇರುವ 13,123 ಅಡಿ ಎತ್ತರದ ಶಿಖರ ಚಂದ್ರಶೀಲದಿಂದ ಸೂರ್ಯೋದಯವನ್ನು ವೀಕ್ಷಿಸಬಹುದಾಗಿದೆ.


   Tungnath, Uttarakhand, Rudraprayag, ತುಂಗನಾಥ್, ಉತ್ತರಾಖಂಡ್, ರುದ್ರಪ್ರಯಾಗ್,Indian state of Uttarakhand,Panch Kedar temples